ಪಲ್ಲಕ್ಕಿ ನಿರ್ದೇಶನದಲ್ಲಿ ಶೂರ ಸಿಂಧೂರ ಲಕ್ಷ್ಮಣ
Posted date: 04 Wed, Jun 2014 – 10:33:00 AM

ಈ ಹಿಂದೆ ಶ್ರೀ ಕ್ಷೇತ್ರ ಕೈವಾರ ತಾತಯ್ಯ, ದೇವನಹಳ್ಳಿ ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದ ಪಲ್ಲಕ್ಕಿ ಈಗ ಮತ್ತೊಂದು ಐತಿಹಾಸಿಕ ಚಲನಚಿತ್ರಕ್ಕೆ ಕೈಹಾಕಿದ್ದಾರೆ. ಉತ್ತರ ಕರ್ನಾಟಕದಾದ್ಯಂತ ನಾಟಕದ ಮೂಲಕ ಮನೆ ಮಾತಾದ ಶೂರ ಸಿಂಧೂರ ಲಕ್ಷ್ಮಣ ಎಂಬ ಸ್ವಾತಂತ್ರ ಯೋಧನ ಕಥೆಯನ್ನು ತೆರೆಯ ಮೇಲೆ ತರಲು ಸಿದ್ಧತೆ ನಡೆಸಿದ್ದಾರೆ.
ಬಡ ಜನತೆಯ ಅನ್ನದಾತನಾಗಿ ದೀನ ದಲಿತರನ್ನು ತೆರಿಗೆಯಿಂದ ಮುಕ್ತಗೊಳಿಸಿ ಸ್ವಾತಂತ್ರ ಸಂಗ್ರಾಮದಲ್ಲಿ ಕೆಚ್ಚೆದೆಯಿಂದ ಹೋರಾಡಿದ ಶೂರ ಸಿಂಧೂರ ಲಕ್ಷ್ಮಣನ ದೇಶ ಪ್ರೇಮವನ್ನು ಸಾರುವ ನೈಜ ಕಥೆ ಇದಾಗಿದ್ದು ಈ ಯೋಧನ ಬಗ್ಗೆ ಇದುವರೆಗೆ ಯಾರೂ ಅರಿಯದ ಇನ್ನೂ ಹಲವಾರು ಸಂಗತಿಗಳನ್ನು ಸಂಗ್ರಹಿಸಿ ಈ ಚಿತ್ರದಲ್ಲಿ ಪಲ್ಲಕ್ಕಿ ಅಳವಡಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಸತತವಾಗಿ ೬ ವರ್ಷಗಳ ಕಾಲ ಅಧ್ಯಯನ ನಡೆಸಿ ಹಿಂದೆ ಬಂದ ನಾಟಕದಲ್ಲಿ ಸಾಹಿತ್ಯ ಗ್ರಂಥಗಳಲ್ಲಿ ಇಲ್ಲದ ಹಲವಾರು ವಿಶೇಷ ಸಂಗತಿಗಳನ್ನು ಈ ಚಿತ್ರದಲ್ಲಿ ನಿರ್ದೇಶಕ ಪಲ್ಲಕ್ಕಿ ತೋರಿಸಲಿದ್ದಾರೆ.
ತಾತಾ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಲಿರುವ ಈ ಚಿತ್ರಕ್ಕೆ ಕಥೆ, ಚಿತ್ರಕತೆ ಬರೆದು ನಿರ್ದೇಶನ ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ಪಲ್ಲಕ್ಕಿಯವರೇ ಹೊತ್ತಿದ್ದಾರೆ. ಈಗಾಗಲೇ ಸಾಮಾಜಿಕ ಹಾಗೂ ಪೌರಾಣಿಕ ಚಿತ್ರಗಳನ್ನು ನಿರ್ದೇಶಿಸಿ ಅನುಭವ ಪಡೆದಿರುವ ಪಲ್ಲಕ್ಕಿ ಇದೇ ಮೊದಲ ಬಾರಿಗೆ ಐತಿಹಾಸಿಕ ಚಿತ್ರ ನಿರ್ದೇಶಿಸ ಹೊರಟಿದ್ದಾರೆ. ಸಿಂಧೂರ ಲಕ್ಷ್ಮಣನ ಕುಟುಂಬವೇ ಇಲ್ಲವಾಗಿದೆ ಎಂದುಕೊಂಡಿದ್ದ ಸಮಯದಲ್ಲಿ ದೇವನಹಳ್ಳಿ ಚಿತ್ರದ ಮುಹೂರ್ತಕ್ಕೆ ಅವರ ಕುಟುಂಬದವರನ್ನು ಕರೆಸಿ ಪತ್ರಕರ್ತರಿಗೆ ಪರಿಚಯಿಸಿದ ಪಲ್ಲಕ್ಕಿ ಈಗ ಅದೇ ಚಿತ್ರವನ್ನು ಮಾಡಹೊರಟಿದ್ದಾರೆ.
ಆಶಾಡ ಮುಗಿದ ನಂತರ ಚಿತ್ರೀಕರಣ ಪ್ರಾರಂಭವಾಗಲಿರುವ ಈ ಚಿತ್ರದಲ್ಲಿ ಅಲ್ಲಮಪ್ರಭು ಹಾಗೂ ಬಸವಣ್ಣನವರ ವಚನಗಳನ್ನೂ ಸಹ ಬಳಸಿಕೊಳ್ಳಲಾಗುವುದು. ಚಿತ್ರಕ್ಕೆ ಬಿ.ಎಲ್. ವೇಣು ಸಂಭಾಷಣೆ, ಎಂ.ಆರ್. ಸೀನು ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ, ಸುರೇಶ್ ಅರಸ್ ಸಂಕಲನ, ಥ್ರ್ರಿಲ್ಲರ್ ಮಂಜು ಸಾಹಸ, ಡಾ|| ಬರಗೂರು ರಾಮಚಂದ್ರಪ್ಪ, ಡಾ|| ಜಿ.ಎನ್. ಮಲ್ಲಿಕಾರ್ಜುನಪ್ಪ, ಡಾ|| ದೊಡ್ಡರಂಗೇಗೌಡರ ಸಾಹಿತ್ಯವಿದ್ದು ತಾರಾಬಳಗದ ಆಯ್ಕೆ ನಡೆಯುತ್ತಿದೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed